ನೀಲ -
	ಅಚ್ಚನೀಲಿ ಬಣ್ಣದ ಕುರಂದ (ಸ್ಯಾಫೈರ್). ಜವಾಹಿರಿ ವ್ಯವಹಾರದಲ್ಲಿ ಪದ್ಮರಾಗದ ಹೊರತು (ಮಾಣಿಕ್ಯ, ಕೆಂಪು) ಉಳಿದೆಲ್ಲ ಕುರಂದ ವಿಧಗಳನ್ನೂ ನೀಲ ಎಂದು ಕರೆಯುತ್ತಾರೆ. ವ್ಯಾಪಾರಿಗಳು ಇವನ್ನು ಬಿಳಿ ನೀಲ, ಹಳದಿ ನೀಲ ಮತ್ತು ಊದಾ ನೀಲ ಮಣಿಗಳೆಂದು ಕರೆಯುವ ವಾಡಿಕೆಯುಂಟು. ಶ್ರೀ ಲಂಕಾದಲ್ಲಿ ಅರುಣೋದಯ ಆಕಾಶ ವರ್ಣವನ್ನು ಹೋಲುವ ಹಳದಿ ಛಾಯೆಯ ಕೆಂಪು ವರ್ಣದ ಕುರಂದವನ್ನು ಪದ್ಮರಾಗ (ಕಮಲ ವರ್ಣ) ಎಂದು ಕರೆಯುವರು. ಆದರೆ, ಈ ಪದವನ್ನು ಸಂಶ್ಲೇಷಿತ ನೀಲಕ್ಕೆ ಮಿತಗೊಳಿಸಲಾಗಿದೆ. ಒಟ್ಟಿನಲ್ಲಿ ಅಚ್ಚನೀಲಿ ವರ್ಣದ ಕುರಂದಕ್ಕೆ ನೀಲ ಎಂದು ಹೆಸರು. ಇದನ್ನು ಮಾತ್ರ ನೀಲ ಎಂದು ಕರೆಯಬೇಕು. ಇದರಲ್ಲಿ ಅಂತರ್ಗತವಾಗಿರುವ ಕ್ರೋಮಿಯಮ್ ಕಬ್ಬಿಣ ಅಥವಾ ಟೈಟಾನಿಯಮ್ ಆಕ್ಸೈಡುಗಳೇ ವರ್ಣಜನಕ ವಸ್ತುಗಳು. ನೀಲಮಣಿಗಳು ಅತಿಶಾಖಕ್ಕೆ ಒಳಪಟ್ಟಾಗ ಬಣ್ಣ ಕಳೆದುಕೊಳ್ಳುತ್ತವೆ; ಆರಿದಾಗ ಬಣ್ಣ ಪುನಃ ಬರುವುದಿಲ್ಲ. ಕೃತಕ ಅಲ್ಯೂಮಿನಿಯಮ್ಮಿಗೆ 1.5% ಮ್ಯಾಗ್ನೆಟಿಕ್ ಕಬ್ಬಿಣದ ಆಕ್ಸೈಡ್ ಮತ್ತು 0.5% ಟೈಟಾನಿಕ್ ಆಮ್ಲವನ್ನು ಸೇರಿಸಿ ಎ.ವರ್ನಿಯಲ್ ನೀಲಮಣಿಯ ವರ್ಣವನ್ನು ಕೊಡುವುದರಲ್ಲಿ ಯಶಸ್ವಿಯಾದ (1910). ಎಫ್. ಬೋರ್ಡಸ್ ಪ್ರಕಾರ ನೀಲಮಣಿ ವಿಕಿರಣ ಕ್ರಿಯೆಗೆ ಒಳಗಾದಾಗ ಮೊದಲು ಹಸಿರು ಬಣ್ಣಕ್ಕೆ ತಿರುಗಿ ಅನಂತರ ಹಳದಿ ಬಣ್ಣಕ್ಕೆ ಬದಲಾಯಿಸುತ್ತದೆ. ಗಾಢ ನೀಲಿ (ಸಾಮಾನ್ಯ ಕಿರಣ) ಮತ್ತು ಹಳದಿ ಛಾಯೆಯ ನೀಲಿವರ್ಣಗಳಿಂದ (ಅಸಾಮಾನ್ಯ ಕಿರಣ) ಕೂಡಿದ ದ್ವಿವರ್ಣತೆ ನೀಲಮಣಿಯ ವಿಶಿಷ್ಟ ಗುಣ. ಆದ್ದರಿಂದ ನೀಲವನ್ನು ಬೇಸಲ್ ಪ್ಲೇನ್ ಮುಖಕ್ಕೆ ಸಮಾಂತರವಾಗಿ ಚಪ್ಪಟೆ ಉನ್ಮುಖ ಕೊಟ್ಟು ಕತ್ತರಿಸಬೇಕು.

	ಕುರಂದದ ಹೊಳಪು ಗಾಜಿನ ಹೊಳಪನ್ನು ಹೋಲುತ್ತದೆ. ಅತ್ಯುತ್ತಮವಾದವು ಸ್ವಚ್ಛವಾಗಿ ಪಾರಕವಾಗಿರುವುವು. ಆದರೆ ಅಸ್ಫಟಿಕ ವಸ್ತುಗಳು ಅಂತರ್ಗತವಾಗಿರುವುದು ಅತಿಸಾಮಾನ್ಯ. ಅಂತರ್ಗತ ವಸ್ತುಗಳು ಪಟ್ಟಕ ಮುಖಗಳು ಬೇಸಲ್ ಪ್ಲೇನಿನೊಂದಿಗೆ ಸೇರಿ ಆಗುವ ಏಣುಗಳಿಗೆ ಸಮಾಂತರವಾಗಿ ಜೋಡಣೆಯಾಗಿದ್ದರೆ ಆ ನೀಲಶಿಲೆಯನ್ನು ಬೇಸಲ್ ಪ್ಲೇನಿಗೆ ಲಂಬವಾಗಿ ಕ್ಯಾಬೊಷಾನ್ ಮಾದರಿ ಕಡೆದರೆ ಅದಕ್ಕೆ ತಾಗಿದ ಬೆಳಕು ಒಳಗಡೆಯಿಂದ ಆರು ಕಿರಣದ ನಕ್ಷತ್ರದೋಪಾದಿಯಲ್ಲಿ ಪ್ರತಿಫಲಿಸುತ್ತದೆ. ಇದನ್ನು ನಕ್ಷತ್ರ ನೀಲಮಣಿ ಎಂದು ಕರೆಯುವರು. ಇದು ಮನಮೋಹಕವಾದುದು.

	ಪದ್ಮರಾಗ, ನೀಲ ಮುಂತಾದ ವಿವಿಧ ಬಗೆಯ ರತ್ನಗಳ ಕೃತಕ ತಯಾರಿಕೆಯಲ್ಲಿ ಮನುಷ್ಯ ಯಶಸ್ಸುಗಳಿಸಿದ್ದರೂ ಅದರ ಪ್ರಭಾವ ವಾಣಿಜ್ಯ ಪ್ರಪಂಚದಲ್ಲಿ ಅತ್ಯಲ್ಪವೆಂದೇ ಹೇಳಬೇಕು. ಮಾರುಕಟ್ಟೆಯಲ್ಲಿ ನೈಜರತ್ನಗಳಿಗೇ ಬೇಡಿಕೆ ಹೆಚ್ಚು; ಅವುಗಳ ಬೆಲೆ ಕೃತಕ ರತ್ನಗಳದ್ದಕ್ಕಿಂತ ಬಲು ದುಬಾರಿ. ಹಿರಿಗಾತ್ರದ ನೀಲಮಣಿಗಳು ಪದ್ಮರಾಗಕ್ಕಿಂತ ಹೇರಳವಾಗಿ ದೊರೆಯುತ್ತವೆ. ಈ ಅಂಶ ಅವುಗಳ ಮೌಲ್ಯ ಇಳಿಮುಖವಾಗಲು ಕಾರಣವಾಗಿದೆ.

	ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಹಲವು ಪ್ರಸಿದ್ಧ ನೀಲಮಣಿಗಳಿವೆ. ಗುಲಾಬಿ ಆಕಾರದ ಕೆತ್ತನೆ ಇರುವ ಅತಿಸುಂದರವಾದ ನೀಲಮಣಿ ಮೊದಲನೆಯದು. ಇದು ಅಷ್ಟಭುಜಾಕೃತಿಯದು. ವ್ಯಾಸ 19 ಮಿಮೀ; ತೂಕ 31.5 ಕ್ಯಾರೆಟ್. ಇದನ್ನು ಪದ್ಮರಾಗಗಳೂ ಮತ್ತು ಪಚ್ಚೆಗಳೊಂದಿಗೆ ಚಿನ್ನದ ಮಾತೃಕೆಯಲ್ಲಿ ಬೆಣಚುಗುಂಡಿಯ ಮೇಲೆ ಕೂರಿಸಿದೆ. ಬುದ್ಧನ ಸುಂದರಮೂರ್ತಿಯನ್ನು ಕೆತ್ತಿರುವುದು ಎರಡನೆಯದರಿಂದ; ಇದು ಬಂಗಾರದ ಸೂಜಿಯ ಮೇಲೆ ಕೂತಿದೆ.

	ಸಯಾಮ್ ಮತ್ತು ಶ್ರೀಲಂಕಾದಲ್ಲಿ ಅತ್ಯಮೂಲ್ಯ ನೀಲಮಣಿಗಳು ದೊರೆಯುತ್ತವೆ. ನೀಲಮಣಿ ಸ್ಫಟಿಕಗಳು ಗೋಪುರಾಕೃತಿಯವು; ಬಣ್ಣ ಕಡು ನೀಲಿ. ಕೆಲವು ವೇಳೆ ಮಖಮಲ್ಲಿನಂಥ ಹೊಳಪಿರುವುದು. ಗರಿಕೆಹುಲ್ಲಿನ ಅಡಿಯಲ್ಲಿ ಹುದುಗಿ ದೊರೆತ ಬೃಹತ್ ನೀಲ (1929) 958 ಕ್ಯಾರೆಟ್ ತೂಕವಿತ್ತು. ಇದು ವನರತ್ನ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದನ್ನು ಕತ್ತರಿಸಿ 6 ಅತ್ಯುತ್ಕøಷ್ಟ ನೀಲಮಣಿಗಳನ್ನು ಪಡೆಯಲಾಯಿತು. 

	ಬರ್ಮ ದೇಶದಲ್ಲಿ ನೀಲಮಣಿಗಳು ದೊರೆಯುವ ಪ್ರದೇಶ ಮೊಗಾಕಿಗೆ(13 ಕಿಮೀ) ಪಶ್ಚಿಮಕ್ಕಿದೆ. ಈ ಪ್ರದೇಶ ಸಮುದ್ರಮಟ್ಟದಿಂದ 300 ಮೀ ಎತ್ತರದಲ್ಲಿದೆ. ಇಲ್ಲಿ ನೀಲಮಣಿಗಳು ಮೂಲ ಅಗ್ನಿಶಿಲೆಗಳಿಂದ ಬಿಡುಗಡೆಯಾಗಿ ಬೆಟ್ಟಗಳ ಇಳಿಜಾರು ಮತ್ತು ಕಣಿವೆಗಳಲ್ಲಿ ಸಂಗ್ರಹವಾಗಿರುವ ಗರಸು ನಿಕ್ಷೇಪಗಳಲ್ಲಿ ದೊರೆಯುತ್ತವೆ. ಬರ್ಮಾದ ನೀಲಮಣಿಗಳು ಕೀಳುದರ್ಜೆಯವೆಂದು ಕುಖ್ಯಾತಿ ಪಡೆದಿವೆ. ಇದು ಸತ್ಯ ದೂರವಾದ ಸಂಗತಿ. ಶ್ರೀಲಂಕಾದ ವಿಚಾರವೇ ಬೇರೆ. ಇಲ್ಲಿ ನೀಲಮಣಿಗಳು ಹೇರಳವಾಗಿರುವುವದಲ್ಲದೆ ಅತ್ಯುತ್ತಮವಾದವೆಂದು ಖ್ಯಾತಿಯನ್ನು ಕೂಡ ಪಡೆದಿವೆ. ಇಲ್ಲಿನ ನೊರಜು ನಿಕ್ಷೇಪಗಳಲ್ಲಿ ನೀಲಮಣಿಗಳೇ ಅಲ್ಲದೆ ಮಾಣಿಕ್ಯ ಕ್ರಿಸೊಬೆರಿಲ್, ಸ್ಪಿನೆಲ್, ಜಿರ್ಕಾನ್, ಗಾರ್ನೆಟ್, ಟೂರ್ಮಲಿನ್, ಬೆಣಚು, ಮೂನ್‍ಸ್ಟೋನ್, ಅಪಟೈಟ್ ಇತ್ಯಾದಿ ಇತರ ರತ್ನಗಳೂ ದೊರೆಯುತ್ತವೆ. ಮೋಹಕ ನೀಲಮಣಿಗಳು ಭಾರತದ ಅನೇಕ ಕಡೆಗಳಲ್ಲಿ ಅದರಲ್ಲೂ ಕಾಶ್ಮೀರದ ವಾಯವ್ಯ ಹಿಮಾಲಯ ಪರ್ವತಶ್ರೇಣಿಗಳಲ್ಲೊಂದಾದ ಝಾನ್‍ಸ್ಕರ್ ಶ್ರೇಣಿಯಲ್ಲಿ ದೊರೆಯುತ್ತವೆ. ಪೆಗ್ಮಟೈಟ್ ಇವುಗಳ ಮೂಲಶಿಲೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಂಗಯಮ್ ಪ್ರದೇಶದಲ್ಲಿ ತಿಳಿನೀಲಿ ವರ್ಣದ ನೀಲಮಣಿಗಳು ದೊರೆಯುತ್ತವೆ. ಅಚ್ಚನೀಲಿಯ ಕುರಂದ ಬಿಡಿ ಹರಳುಗಳಾಗಿ ಅಥವಾ ಬೂದು ಬಣ್ಣದ ಕುರಂದದಲ್ಲಿ ಚಿಕ್ಕಮಡಿಗಳ ಹಾಗೆ ಹೊಳೆನರಸೀಪುರ ಮತ್ತು ಅರಸೀಕೆರೆ ಪ್ರದೇಶಗಳ ಕೆಲವೆಡೆಗಳಲ್ಲಿ ದೊರೆಯುತ್ತದೆ. ಇದು ಅಪಾರಮರ್ಶಕ ಮತ್ತು ಅಪ್ರಕಾಶಯುತವಾಗಿ ಇರುವುದರಿಂದ ಉತ್ತಮ ನೀಲಮಣಿಯಾಗಲಾರದು.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ